ಉಣ್ಣೆ ಜುಂಗು
 
ಉಣ್ಣೆನೂಲುವ ಕ್ರಮದಂತೆ ನೂತ ಉಣ್ಣೆಯಿಂದ ರಚಿತವಾದ, ಪುನರುತ್ಪಾದಿತ ಸನಗು (ಷಾಡ್ಡಿ). ಒಂದು ಸಲ ತಯಾರಾದ ಬಟ್ಟೆ ಹರಿದು ತುಣುಕುಗಳಾದಾಗ ಅವನ್ನು ಪುನಃ ನೂತು ನೇಯ್ದು ಮಾಡಿದ ವಿಶಿಷ್ಟ ಮಾದರಿಯ ಬಟ್ಟೆ ಇದು. ಹೆಣಿಗೆ ಬಟ್ಟೆಗಳು (ನಿಟ್ಟೆಡ್ ಫ್ಯಾಬ್ರಿಕ್ಸ್), ಬಿರುನೂತ ಬೀಳು (ಹಾರ್ಡ್ ಸ್ಪಿನ್ನಿಂಗ್ಸ್ ವೇಸ್ಟ್ಸ್). ಶಾಲುಗಳೇ ಮುಂತಾದುವುಗಳಿಂದ ಇದನ್ನು ತಯಾರಿಸುವರು. ಇವುಗಳ ಜೊತೆಗೆ ಹೊಸ ಉಣ್ಣೆಯನ್ನು ಸೇರಿಸಿ ಸರಾಸರಿ ಮಟ್ಟದ ನೂಲನ್ನು ಸಿದ್ಧಪಡಿಸುತ್ತಾರೆ. ಷಾಡ್ಡಿಯ ಗುಣಲಕ್ಷಣಗಳು ಅದನ್ನು ತಯಾರಿಸುವಾಗ ಉಪಯೋಗಿಸುವ ಕಚ್ಚಾವಸ್ತುವಿನ ವೈವಿಧ್ಯವನ್ನು ಅವಲಂಬಿಸಿವೆ. ಚಿಂದಿಗಳನ್ನು ಎಳೆಗಳಾಗಿ ಬಿಡಿಸುವಾಗ ಅತ್ಯಂತ ಬಿರುಸಾದ ಕ್ರಮಗಳಿಗೆ ಒಳಗಾಗಿಸುವುದರಿಂದ ಅವು ಬಲು ಚಿಕ್ಕ ಎಳೆಗಳಾಗಿ ಪರಿಣಮಿಸುತ್ತವೆ. ಆದ್ದರಿಂದ ಸಾಮಾನ್ಯವಾಗಿ ಅವನ್ನು ನೂಲುವಾಗ ಸಹಾಯಕವಾಗಲು ಹಾಗೂ ಮತ್ತಷ್ಟು ಬರಲು ಹತ್ತಿಯೊಡನೆ ಬೆರೆಸುತ್ತಾರೆ. 	               
(ವಿ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ